ತಿರುಚ್ಚಿರಾಪ್ಪಳ್ಳಿ
	ತಮಿಳುನಾಡು ರಾಜ್ಯದ ಒಂದು ನಗರ, ತಿರುಚ್ಚಿರಾಪ್ಪಳ್ಳಿ ಜಿಲ್ಲೆಯ ಆಡಳಿತ ಕೇಂದ್ರ. ಮದ್ರಾಸ್ ನಗರದ ನೈಋತ್ಯಕ್ಕೆ, ರೈಲಿನಿಂದ 401 ಕಿಮೀ. (240ಮೈ.) ದೂರದಲ್ಲಿ, ಮದ್ರಾಸ್ - ತ್ರಿವೇಂದ್ರಮ್ ರೈಲುಮಾರ್ಗ ಮತ್ತು ಹೆದ್ದಾರಿಗಳ ಮೇಲೆ ಕಾವೇರಿ ನದೀ ಮುಖಜ ಭೂಮಿಯ ಬುಡದಲ್ಲಿದೆ. ಪ್ರಮುಖ ರೈಲ್ವೆ ಜಂಕ್ಷನ್. ಹಿಂದೆ ಇದು ದಕ್ಷಿಣ ರೈಲ್ವೆಯ ಆಡಳಿತ ಕೇಂದ್ರವಾಗಿತ್ತು. ಇದರ ಉಪನಗರವಾದ ಗೋಲ್ಡನ್ ರಾಕ್‍ನಲ್ಲಿ ಈಗ ದಕ್ಷಿಣ ರೈಲ್ವೆಯ ಮೀಟರ್ ಗೇಜ್ ವಿಭಾಗದ ಕಾರ್ಯಾಲಯವಿದೆ. ಇಲ್ಲಿ ವಿಮಾನ ನಿಲ್ದಾಣವೂ ಆಕಾಶವಾಣಿಯ ಪ್ರಸಾರಕೇಂದ್ರವೂ ಇದೆ. ರಾವಣನ ಸಂಬಂಧಿಗಳಲ್ಲೊಬ್ಬನಾದ ತ್ರಿಶಿರನೆಂಬ ಅಸುರ ಇಲ್ಲಿ ಆಳಿದ್ದರಿಂದ ಇದಕ್ಕೆ ತ್ರಿಶಿರಾಪ್ಪಳ್ಳಿ ಎಂಬ ಹೆಸರು ಪ್ರಾಪ್ತವಾಯಿತೆಂದು ಹೇಳುತ್ತಾರೆ. ತ್ರಿಶಿರಾಪ್ಪಳ್ಳಿ ಕಾಲಕ್ರಮೇಣ ತಿರುಚ್ಚಿರಾಪ್ಪಳ್ಳಿಯಾಯಿತು. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಟ್ರಿಚಿನಾಪೊಲಿ ಎನಿಸಿಕೊಂಡಿದ್ದ ಇದಕ್ಕೆ ಕನ್ನಡದಲ್ಲಿ ತಿರುಚಿನಾಪಳ್ಳಿ ಎಂಬ ಹೆಸರೂ ವಾಡಿಕೆಯಲ್ಲಿದೆ. ಇದನ್ನು ಸಂಕ್ಷಿಪ್ತವಾಗಿ ಟ್ರಿಚಿ, ತಿರುಚ್ಚಿ ಎಂದೂ ಕರೆಯುವುದುಂಟು. 

	ಇದು 7ನೆಯ ಶತಮಾನದಿಂದ 17 ನೆಯ ಶತಮಾನದವರೆಗೆ ಪಲ್ಲವ, ಚೋಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಪ್ರಾದೇಶಿಕ ರಾಜಧಾನಿಯಾಗಿದ್ದಿತು. 17-19 ನೆಯ ಶತಮಾನ ಕಾಲದಲ್ಲಿ ತಿರುಚ್ಚಿರಾಪ್ಪಳ್ಳಿಯ ಮಧ್ಯದಲ್ಲಿರುವ 273 ಅಡಿ ಎತ್ತರದ ಬಂಡೆಯನ್ನು ಆವರಿಸಿದ್ದ ಕೋಟೆ ಮುಸ್ಲಿಮ್, ಮರಾಠಾ, ಫ್ರೆಂಚ್ ಮತ್ತು ಬ್ರಿಟಿಷ್ ಸೈನ್ಯಗಳ ನಡುವಿನ ಕದನದ ರಂಗವಾಗಿತ್ತು. ಈಗ ಕೋಟೆ ಬಿದ್ದುಹೋಗಿದೆ. ಬಂಡೆಯ ತುದಿಗೆ ಗಣೇಶನ (ಉಚ್ಚಿಪ್ಪಿಳ್ಳೆಯಾರ್) ಗುಡಿಯಿದೆ. ಅಲ್ಲಿಂದ ಕಾಣುವ ಸುತ್ತಮುತ್ತಲಿನ ಪ್ರದೇಶದ ದೃಶ್ಯ ಬಹಳ ಸುಂದರವಾದ್ದು. ರಾಬರ್ಟ್ ಕ್ಲೈವ್ ವಾಸಿಸುತ್ತಿದ್ದ ಕಟ್ಟಡದಲ್ಲಿ ಈಗ ಸೇಂಟ್ ಜೋಸೆಫೆ ಕಾಲೇಜಿದೆ. 

	ಇದು ಶೈಕ್ಷಣಿಕ, ಔದ್ಯೋಗಿಕ ಮತ್ತು ವ್ಯಾಪಾರ ಕೇಂದ್ರ. ಇಲ್ಲಿ ಮದ್ರಾಸ್ ವಿಶ್ವ ವಿದ್ಯಾನಿಲಯಕ್ಕೆ ಸೇರಿದ ಎಂಟು ಕಾಲೇಜುಗಳಿವೆ. ಇಲ್ಲಿ ವಿದ್ಯುತ್ ಥರ್ಮಲ್ ಬಾಯಿಲರ್ ಮತ್ತು ರೈಲ್ವೆ ಎಂಜಿನ್ ಕಾರ್ಖಾನೆಗಳಿವೆ. ಹಿಂದಿನಿಂದಲೂ ನಡೆದು ಬಂದಿರುವ, ಕೈಮಗ್ಗದ ಬಟ್ಟೆಗಳನ್ನು ನೇಯುವ ಹಾಗೂ ಚುಟ್ಟಾ ಮತ್ತು ಬೀಡಿಗಳನ್ನು ಕಟ್ಟುವ ಗೃಹಕೈಗಾರಿಕೆಗಳೂ ಇವೆ. ಕೈಮಗ್ಗದ ಬಟ್ಟೆ, ಗಾಜಿನ ಬಳೆ, ತಾಳೆಯ ಎಲೆಗಳ ಪೆಟ್ಟಿಗೆ, ಚುಟ್ಟಾ ಮತ್ತು ಬೀಡಿ, ಮರ ಮತ್ತು ಮಣ್ಣಿನ ಆಟಿಕೆ, ಚಾಪೆ, ನೂಲಿನ ಜಮಖಾನೆ ಮತ್ತು ಕೃತಕ ಹರಳುಗಳಿಗೆ ಇದು ಪ್ರಸಿದ್ಧವಾದ್ದು. ದಿನತಂತಿ ಮತ್ತು ದಿನಮಲರ್ ಪತ್ರಿಕೆಗಳು ಇಲ್ಲಿಂದ ಪ್ರಕಟವಾಗುತ್ತವೆ. ಈ ನಗರದ ಜನಸಂಖ್ಯೆ 3,06,247 (1971). 

	ತಿರುಚ್ಚಿರಾಪ್ಪಳ್ಳಿ ಜಿಲ್ಲೆ ತಮಿಳುನಾಡು ರಾಜ್ಯದ ಮೂರನೆಯ ದೊಡ್ಡ ಜಿಲ್ಲೆ. ಇದು ಬಹುತೇಕ ಕಾವೇರಿ ನದೀ ಕಣಿವೆಯಲ್ಲಿದೆ. 1948ರಲ್ಲಿ ಹಳೆಯ ಪುದುಕೋಟೆ ಸಂಸ್ಥಾನ ಇದರಲ್ಲಿ ಸೇರಿತ್ತು. ಜಿಲ್ಲೆಯ ವಿಸ್ತೀರ್ಣ 14,278 ಚ.ಕಿಮೀ (5.513 ಚ.ಮೈ.). ಜನಸಂಖ್ಯೆ 38,44,901 (1971). ಇಲ್ಲಿಯದು ಉಷ್ಣ ವಾಯುಗುಣ. ಈಶಾನ್ಯ ಮತ್ತು ನೈಋತ್ಯ ಮಾನ್‍ಸೂನ್‍ಗಳಿಂದ ವರ್ಷದಲ್ಲಿ ಸರಾಸರಿ 34" ಮಳೆ ಬೀಳುತ್ತದೆ. ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿಯುವ ಕಾವೇರಿ ನದಿ ತಿರುಚ್ಚಿರಾಪ್ಪಳ್ಳಿ ನಗರದ ಪ್ರಸಿದ್ಧ ಬಂಡೆಯನ್ನು ದಾಟಿದ ಅನಂತರ ಕವಲೊಡೆಯುತ್ತದೆ. ಇದರಿಂದ ಸಂಭವಿಸಿರುವ ದ್ವೀಪವೇ ಶ್ರೀರಂಗಂ, ಕಾವೇರಿಯ ಎರಡೂ ಕವಲುಗಳು ಪಟ್ಟಣದಿಂದ 16 ಕಿಮೀ. ದೂರದಲ್ಲಿ ಮತ್ತೆ ಒಂದುಗೂಡುತ್ತವೆ. ತಂಜಾವೂರು ಜಿಲ್ಲೆಯ ನೀರಾವರಿ ವ್ಯವಸ್ಥೆಗೆ ಮೂಲವಾದ ಮಹಾ ಆಣೆಕಟ್ಟೆ ಇರುವುದು ಈ ಸ್ಥಳದಲ್ಲಿ. ಇದು ಭಾರತದಲ್ಲೆ ಅತ್ಯಂತ ಹಳೆಯ ನೀರಾವರಿ ವ್ಯವಸ್ಥೆ. ತಿರುಚ್ಚಿರಾಪ್ಪಳ್ಳಿ ನಗರಕ್ಕೂ ಶ್ರೀರಂಗಂ ದ್ವೀಪಕ್ಕೂ ನಡುವೆ 32 ಕಮಾನುಗಳ ಸೇತುವೆಯೊಂದಿದೆ. ದ್ವೀಪದ ಮೇಲೆ ರಂಗನಾಥ ಸ್ವಾಮಿಯ ಪ್ರಸಿದ್ಧ ಶ್ರೀವೈಷ್ಣವ ದೇವಾಯಲವಿದೆ. ಇದರ ಪೂರ್ವಕ್ಕೆ ಸನಿಯದಲ್ಲೇ ಜಂಬುಕೇಶ್ವರನ ದೇವಾಲಯುವುಂಟು. 

	ಜಿಲ್ಲೆ ಫಲವತ್ತಾದ ನೆಲದಿಂದ ಕೂಡಿದೆ. ಬತ್ತ, ಕಬ್ಬು ಮತ್ತು ವೀಳೆಯದೆಲೆಯ ಬೆಳೆಗಳಿಗೆ ಕಾವೇರಿಯ ನೀರನ್ನು ನೀರಾವರಿಯ ಮೂಲಕ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ ಜಿಪ್ಸಮ್ ನಿಕ್ಷೇಪಗಳುಂಟು. ದಾಲ್ಮಿಯಾಪುರದಲ್ಲಿ ಸಿಮೆಂಟಿನ ಕಾರ್ಖಾನೆಯಿದೆ. ಫಾಸ್ಟರಸ್ ಮತ್ತು ಮ್ಯಾಗ್ನಟೈಟ್ ಇಲ್ಲಿ ದೊರಕುವ ಇನ್ನೆರಡು ಖನಿಜಗಳು. 
										(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ